July 23, 2025 4:17 am

ಸಹೃದಯಿ, ಸಂಶೋಧಕಿ ನಾಡೋಜ ಕಮಲಾ ಹಂಪನಾ

ನಾಡೋಜ ಡಾ. ಕಮಲಾ ಹಂಪನಾ ಅವರದು ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಿರಿಯತನ, ವಿದ್ವತ್ತಿಗೆ ಕೇಳಿಬರುವ ಬೆರಳೆಣಿಕೆಯ ಕಲವೇ ಗಮನಾರ್ಹ ಹೆಸರುಗಳಲ್ಲಿ ಒಂದಾಗಿದೆ. ಅವರು ಹೃದಯಾಘಾತದಿಂದ ನಮ್ಮನ್ನು ಆಗಲಿದಾಗ ಅವರಿಗೆ 89 ವಯಸ್ಸಾಗಿತ್ತು. ಅವರ ಅಗಲಿಕೆ ಕನ್ನಡದ ಸಾರಸ್ವತ ಲೋಕಕ್ಕೆ ಆದ ನಷ್ಟವೆಂದೇ ಹೇಳಬೇಕು.
ಕಮಲಾ ಹಂಪನಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ 1935ರಲ್ಲಿ ಜನಿಸಿದರು. ತುಮಕೂರು, ಮೈಸೂರುಗಳಲ್ಲಿ ಪದವಿ, ಉನ್ನತ ಶಿಕ್ಷಣ ಪಡೆದರು. ತುಮಕೂರಿನ ಪದವಿ ಶಿಕ್ಷಣದಲ್ಲಿ ಹಂಪ ನಾಗರಾಜಯ್ಯ ಅವರು ಸಹಪಾಠಿಗಳು, ಮುಂದೆ ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆವಾಗ ಹಂಪನಾ – ಕಮಲಾ ಪ್ರೀತಿಸಿ ಮದುವೆ ಆಗಲು ನಿರ್ಧರಿಸಿದರು. ಆ ಕಾಲಘಟ್ಟದಲ್ಲಿ ಎರಡು ಮನೆಯ ವಿರೋಧದ ನಡುವೆಯೂ ಬಾಳಸಂಗಾತಿಗಳಾಗಿ ಸಮಾಜಕ್ಕೆ ಮಾದರಿಯ ದಂಪತಿಯಾಗಿ, ಸಂದೇಶ ಕಳುಹಿಸಿದರು.
ಕಮಲಾ ಹಂಪನಾ ಬೇರೆಯಲ್ಲ, ಹಂಪನಾ ಬೇರೆಯಲ್ಲ ಎಂಬುವಷ್ಟರ ಮಟ್ಟಿಗೆ ಅವರ ಬದುಕು, ಸಾಹಿತ್ಯ ಸಾಧನೆ, ಗೌರವಗಳು ಇಮ್ಮಡಿಯಾದವು. ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇವರಿಬ್ಬರದ್ದೂ ಒಟ್ಟೋಟ್ಟಾಗಿ ನೆನಪಿಗೆ ಬರುವ ಜೋಡಿ ಹೆಸರುಗಳು. ಕನ್ನಡದ ಸಂದರ್ಭದಲ್ಲಿ ಈ ಜೋಡಿಯ ದಾಂಪತ್ಯ ಹಲವು ರೀತಿಯಲ್ಲಿ ಸಮಾನವಾದದ್ದು. ‘ಜಕ್ಕವಕ್ಕಿ ಪಕ್ಷಿಗಳ ಹಾಗೆ ಇವರ ಅನವರತ ದಾಂಪತ್ಯ. ಶಿಕ್ಷಣ. ಪಾಂಡಿತ್ಯ, ಸಾಹಚರ್ಯ, ಸಮಾನ ಆಸಕ್ತಿಗಳು, ಸಮಾನವಾದ ಸ್ನೇಹ ಬಳಗ… ಹೀಗೆ ಹಲವು ಸಾಮ್ಯತೆಗಳಲ್ಲಿ ಇವರಿಬ್ಬರ ಬದುಕು ನಡೆದಿದೆತ್ತು. ಅಂರ್ತಜಾತಿ ವಿವಾಹವಾಗಿ ಮುಂದಿನ ತಲೆಮಾರಿಗೆ ಆದರ್ಶ ದಾಂಪತ್ಯ ಹೇಗಿರಬೇಕು ಎಂಬುದನ್ನು ಸಾಬೀತು ಮಾಡಿ ಈ ಜೋಡಿ ತೋರಿದ್ದಾರೆ.
ಕುಟುಂಬ ಜೀವನದಲ್ಲಿ ಯಾವಾಗಲೂ ಹೆಣ್ಣಿನ ಮೇಲೆ ಅಧಿಕ ಒತ್ತಡಗಳಿರುತ್ತವೆ. ವೃತ್ತಿ, ಕುಟುಂಬ, ಪ್ರವೃತ್ತಿ, ಸ್ನೇಹ, ಬಂಧು-ಬಾಂಧವ್ಯಗಳನ್ನು ಏಕಕಾಲಕ್ಕೆ ಯಶಸ್ವಿಯಾಗಿ ನಿರ್ವಹಿಸಲೇಬೇಕಾದ ಅನಿವಾರ್ಯ ಒತ್ತಡಗಳು ಇಂತಹವರ
ಜೀವನದಲ್ಲಿ ಸವಾಲಾಗಿ ನಿಲ್ಲುತ್ತವೆ. ಈ ಸವಾಲುಗಳನ್ನು ಕಮಲಾ ಅವರು ಯಶಸ್ವಿಯಾಗಿ ನಿರ್ವಹಿಸಿದರು. ಮುಖ್ಯವಾಗಿ ಹತ್ತುಹಲವು ಜನಕ್ಕೆ ಬೇಕಾದವರಾಗಿ ಬದುಕಿದರು. ಇವರ ಗೈರುಹಾಜರಿ ನಾಡಿನ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಆದ ಬಹು ದೊಡ್ಡ ನಷ್ಟ.
ಅವರು ಕೇವಲ ಲೇಖಕಿ ಮಾತ್ರವಲ್ಲ ಈ ನಾಡಿನ ಸಂಗತಿಗಳಿಗೆ ದನಿಕೊಟ್ಟು ಮಾತನಾಡಬಲ್ಲ ಹಲವು ಹಿರಿಯ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದರು. ಸಾಂಸ್ಕೃತಿಕ ಕ್ಷೇತ್ರಕ್ಕೆ ದಕ್ಕೆಯೊದಗಿದಾಗ ಹೊರಗೆ ಬಂದು ಮಾತನಾಡಬಲ್ಲ, ಎಚ್ಚರ ಕೊಡುವ ಹಾಗೆ ಮಾತನಾಡಬಲ್ಲ ವ್ಯಕ್ತಿತ್ವ ಅವರದಾಗಿತ್ತು. ಸರ್ಕಾರದೊಂದಿಗೆ ಒಳ್ಳೆಯ ಸಂಬಂಧವಿಟ್ಟುಕೊಂಡು ಸಮಾಜದ ಒಳತಿಗೆ ಆ ಸಂಬಂಧವನ್ನು ಬಳಸಿಕೊಳ್ಳುತ್ತಿದ್ದ ಹಂಪಾನಾ ದಂಪತಿಗಳು ಶಿಷ್ಯರಾದ ನಮ್ಮಂತವರಿಗೆ ಒಂದು ಆದರ್ಶವಾಗಿದ್ದರು.
ಜನಪದ ಸಾಹಿತ್ಯ, ಶಾಸನ ಸಾಹಿತ್ಯ, ಶಾಸ್ತ್ರ ಸಾಹಿತ್ಯ, ಆಧುನಿಕ ಸಾಹಿತ್ಯ ಪರಂಪರೆಗಳನ್ನು ಆಳವಾಗಿ ಅಭ್ಯಾಸ ಮಾಡಿದವರಾಗಿದ್ದರು. ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಬೆರಳೆಣಿಕೆಯ ಲೇಖಕಿಯರಲ್ಲಿ ಒಬ್ಬರು. ಜೈನ ಸಾಹಿತ್ಯದ ಬಗ್ಗೆ ಅವರ ವಿದ್ವತ್ತು ಬಹಳ ದೊಡ್ಡದು. ಅವರೊಬ್ಬ ಪ್ರಾಚೀನ ಸಾಹಿತ್ಯದ ಅರಿವಿನ, ಆಳ ಬಲ್ಲ ವಿದ್ವಾಂಸ ಪರಂಪರೆಯ ಮುಖ್ಯರು, ಅನುವಾದ ಕ್ಷೇತ್ರದಲ್ಲೂ ಅವರು ಸಾಧನೆ ಮಾಡಿದ್ದಾರೆ. ‘ದ ಏಷ್ಯನ್ ಲೈಟ್ಸ್’ ಎಂಬ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದರು. ಅದರಲ್ಲಿನ ಒಂದು ಮಾತು ಮೌಲಿಕವಾದದ್ದು: “ಮೌಲ್ಯದ ಕಾಳುಗಳ ಬಿತ್ತೋಣ. ನೀತಿಯ ಮರಗಳ ಬೆಳೆಸೋಣ” ಎನ್ನುವ ಉದಾತ್ತ ಆಲೋಚನೆ ಅಲ್ಲಿ ದಾಖಲಿಸಿದರು. ವೃತ್ತಿ ಮತ್ತು ಪ್ರವೃತ್ತಿ ಅಧ್ಯಯನವೇ ಆಗಿದ್ದರಿಂದ ಸತತ ಅಭ್ಯಾಸದ ಫಲವೆಂಬಂತೆ ಅಪಾರವಾದ ಸಾಹಿತ್ಯ ಕೃತಿಗಳನ್ನು ಸ್ವತಂತ್ರವಾಗಿ ಅಷ್ಟೇ ಅಲ್ಲದೆ ಅನುವಾದದ ಮೂಲಕ ನಮ್ಮೊಳಗೆ ಉಳಿದಿದ್ದಾರೆ.
ಅನೇಕ ಸಂಶೋಧಕರಿಗೆ Reference ಕೃತಿಗಳನ್ನು ಪ್ರಕಟಪಡಿಸಿ, ಉಳಿಸಿ ಹೋಗಿದ್ದಾರೆ.
ಲೇಖಕಿಯರು ಸಾಹಿತ್ಯದ ಒಟ್ಟು ಹರಹನ್ನು ಸ್ಕೂಲವಾಗಿ ಗಮನಿಸಿದರೆ ಹೆಚ್ಚು ಮಂದಿ ಸೃಜನಶೀಲ ಪ್ರಕಾರದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ. ಪರಂಪರೆ, ಪುರಾಣ, ಇತಿಹಾಸ, ಸಾಹಿತ್ಯ ಚರಿತ್ರೆಯಲ್ಲಿ ಬೆರಳೆಣಿಕೆಯಷ್ಟು ಲೇಖಕಿಯರು ಆಗ ತೊಡಗಿಸಿಕೊಂಡಿದ್ದರು. ಈಗಂತೂ ಈ ರೀತಿ ತೊಡಗಿಸುವಿಕೆಯನ್ನು ನಾವು ಹುಡುಕಿ ನೋಡಬೇಕಾಗುತ್ತದೆ. ಇಂತಹ ಆಗಾಧವಾದ ಓದು, ಪಾಂಡಿತ್ಯ, ಸಂಶೋಧನೆಗೆ ಕಮಲಾ ಹಂಪನಾ ಅವರು ಏಕಮೇವ ಲೇಖಕಿ ಎನಿಸಿಕೊಂಡಿದ್ದರು ಎಂದು ಹೇಳಿದರೆ ತಪ್ಪಾಗಲಾರದು. ಕಥಾ ಸಂಕಲನ, ಕಾದಂಬರಿ, ಶಿಶುಸಾಹಿತ್ಯ, ಸಂಶೋಧನೆ, ವಿಮರ್ಶೆ, ವೈಚಾರಿಕ, ಅನುವಾದ. ರೆಡಿಯೋ ನಾಟಕಗಳು, ‘ಕಮಲಾಪ್ರಿಯ’ ಎಂಬ ಅಂಕಿತದ ಆಧುನಿಕ ವಚನಗಳು ಹೀಗೆ ಅವರ ಸಾಹಿತ್ಯದ ಹರವು ದೊಡ್ಡದು. ‘ಭರಣ’ ಎಂಬ ಅವರ ಕೃತಿಯಲ್ಲಿ ಪೂರ್ವ ಸಾಹಿತ್ಯದ ಅಧ್ಯಯನದ ಮೂಲಕವೇ ಮಹಿಳಾ ಸಾಹಿತ್ಯ ಚರಿತ್ರೆಯನ್ನು ಕಟ್ಟುವ ಹೊಸ
ಪ್ರಯತ್ನವಿದೆ. ಬಹುತೇಕ ಅವರ ಕೃತಿಗಳ
ಆರಂಭವಾಗುತ್ತವೆ. ಅವರಿಗೆ ‘ಬ’ ಗಳ ಮಮಕಾರ. ಕನ್ನಡ ಸಾಹಿತ್ಯದಲ್ಲಿ ಇಂಥ ಪರಂಪರೆ ಇದೆ. ಲೇಖಕ, ಅಂಕಣಕಾರ ಡಾ.ಹಾ.ಮಾ. ನಾಯಕರು ‘ಸ’ಗಳ ಮಮಕಾರದವರಾಗಿದ್ದರೆ; ಕವಿ ಶಿವಪ್ರಕಾಶ ‘ಮ’ಗಳ ಮಮಕಾರದವರು. ಹಾಗೇ ಕಮಲಾ ಮೇಡಂ ಅವರಿಗೂ ‘ಬ’ ಒಲಿದಿತ್ತು. ಅವರ ಕೃತಿಗಳ ಹೆಸರು ಬಿಂದಲಿ, ಬುಗಡಿ, ಬಾಸಿಂಗ, ಬಾಂದಳ, ಬೊಂಬಾಳ ಹೀಗೆ ಇರುತ್ತಿದ್ದವು.
‘ಕಮಲಾಪ್ರಿಯ’ ಎಂಬ
ಕಾವ್ಯನಾಮದಲ್ಲಿ ಬರೆಯುತ್ತಿದ್ದ ಅವರ ಆಧುನಿಕ ವಚನಗಳು ದಾಂಪತ್ಯವನ್ನು ಒಳಗೊಂಡಂತೆ ಹಲವು ಸಾಮಾಜಿಕ ಸಂಗತಿ ಹಾಗೂ ಸಮಸ್ಯೆಗಳನ್ನು ಒಳಗೊಂಡಿರುತ್ತಿದ್ದವು. ಹಂಪನಾ ಮತ್ತು ಕಮಲಾ ಹಂಪನಾ ಜೋಡಿಯನ್ನು ನಾವೆಲ್ಲರೂ ರೇಗಿಸುತ್ತಿದ್ದುದ್ದುಂಟು. “ಏನ್ಸಾರ್ ಯಾವಾಗಲೂ ಜಕ್ಕವಕ್ಕಿಗಳಂತೆ ಒಟ್ಟಾಗಿ ಪ್ರತ್ಯಕ್ಷರಾಗುತ್ತೀರಿ” ಎಂದರೆ ಕಮಲ ಅವರು ಬೆಚ್ಚನೆಯ ನಗೆ ಬೀರುತ್ತಿದ್ದರು. ಹಂಪನಾ ಮೀಸೆ ತಿರುವಿ ಗತ್ತಿನಿಂದ,
ಖುಷಿಯಿಂದ ನಗುತ್ತಿದ್ದರು.
ನಮ್ಮ ಕರ್ನಾಟಕ ಲೇಖಕಿಯರ ಸಂಘದಲ್ಲಿ ಅವರ ಹೆಸರಿನಲ್ಲಿ ದತ್ತಿಯನ್ನು ಸ್ಥಾಪಿಸಿದ್ದರು. ಆ ಕಾರ್ಯಕ್ರಮಗಳಲ್ಲಿ ಕೆಳಗೆ ಕೂತಿರುತ್ತಿದ್ದ ಹಂಪನಾ ಅವರು ವೇದಿಕೆಯ ಮೇಲೆ ಬಂದು ಕಮಲಾ ಅವರಿಗೆ ಗುಲಾಬಿಯನ್ನು ಕೊಟ್ಟು ‘ಇದು ನನ್ನ ಮಡದಿಗೆ’ ಎಂದು ನಗುತ್ತಿದ್ದರು. ಅವರ ದಾಂಪತ್ಯದ ಇಂತಹ ಹಲವಾರು ನವಿರು ಕ್ಷಣಗಳನ್ನು ನಾವೆಲ್ಲ ಕಂಡಿದ್ದೆವು. ಇವೆಲ್ಲವೂ ಅವರನ್ನು ನೆನಪಿಸಿಕೊಂಡರೆ ಕಣ್ಣುಮುಂದೆ ಬರುತ್ತವೆ.
ಕರ್ನಾಟಕ ಲೇಖಕಿಯರ ಸಂಘದೊಂದಿಗೆ ಉತ್ತಮ: ಸಂಬಂಧವಿಟ್ಟುಕೊಂಡಿದ್ದ ಅವರು ಸಂಘದ ವಿಚಾರ ಬಂದಾಗ ನೀವು ಖಡಕ್ ಆಗಿ ಕಾರ್ಯನಿರ್ವಹಿಸಬೇಕು ಎಂಬ ಸಲಹೆ ಕೊಡುತ್ತಿದ್ದರು. ಕುಪ್ಪಳಿಯಲ್ಲಿ ಕುವೆಂಪು ಸಾಹಿತ್ಯವನ್ನು ಕುರಿತು ನಾವು ಒಂದು ಕಮ್ಮಟ
ನಡೆಸಿದೆವು. ರಾತ್ರಿಯ ಹೊತ್ತು ಊಟವಾದ ನಂತರ ಹೊರಗಡೆ ಅಂಗಳದಲ್ಲಿ ಯಾವುದೇ ವೇದಿಕೆಯಿಲ್ಲದೆ ಸುತ್ತಲೂ ಕುರ್ಚಿಗಳಲ್ಲಿ ಕುಳಿತು ಒಂದು ಅಚಾನಕ್ ಕವಿಗೋಷ್ಟಿ ನಡೆಸಿದೆವು. ನಮ್ಮ ಆಹ್ವಾನವನ್ನು ಮನ್ನಿಸಿ ಬಂದು ನಮ್ಮೊಂದಿಗೆ ಕುಳಿತು ಕವಿತೆಗಳನ್ನು ಕೇಳಿ ಗಂಡಹೆಂಡಿರಿಬ್ಬರೂ ತಾವೂ ಕವಿತೆಗಳನ್ನು ಓದಿ ಆನಂದಿಸಿದ್ದರು.
ಸಾಹಿತ್ಯ ಕ್ಷೇತ್ರದಲ್ಲಿ ಪರಸ್ಪರ ಸಾಥ್ ಕೊಟ್ಟು ಒಟ್ಟಿಗೆ ಬೆಳೆದಂತಹ ಜೋಡಿಗಳು ಹೆಚ್ಚಿಗೆ ಸಿಗಲಾರರು. ಕೆಳವರ್ಗದ ಕಮಲಾ ಮೇಡಂ, ಮೇಲ್ವರ್ಗದ ಜೈನ ಸಮುದಾಯದ ಹಂಪನಾ ಅವರನ್ನು ಮದುವೆಯಾಗಿ ಎದುರಿಸಿದ ಸಂಕಷ್ಟಗಳು ಅಪಾರ. ಅದೆಲ್ಲವನ್ನು ಅವರು ಸ್ಮರಿಸಿಕೊಳ್ಳುತ್ತಿದ್ದರು. ದೂರದರ್ಶನದ ಹಿರಿಯ ಕಾರ್ಯಕ್ರಮ ನಿರ್ವಾಹಕಿ, ಕವಯಿತ್ರಿ ಆರತಿ ಹೆಚ್.ಎನ್ ಮತ್ತು ರಾಜ್ಯಶ್ರೀ ಹೆಚ್.ಎನ್ ಇಬ್ಬರು ಪುತ್ರಿಯರು ಹಾಗೂ ಶ್ರೀಹರ್ಷ ಎಂಬ ಮಗನೊಂದಿಗಿನ ತುಂಬು ಸಂಸಾರವನ್ನು ಯಶಸ್ವಿಯಾಗಿ ವೃತ್ತಿ ಪ್ರವೃತ್ತಿಗಳೊಂದಿಗೆ ಅವರು ನಿರ್ವಹಿಸಿದರು.
ಮೂಡುಬಿದರೆಯಲ್ಲಿ ನಡೆದ 71ನೆಯ “ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ”ನದ ಅಧ್ಯಕ್ಷತೆಯ ಗೌರವಕ್ಕೆ ಅವರು ಪಾತ್ರರಾಗಿದ್ದರು. ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಅಪಾರವಾದ ಶಿಷ್ಯ ಬಳಗವನ್ನುಳ್ಳವರಾಗಿದ್ದರು. ಇಂದು ಸಾಹಿತ್ಯ ಕ್ಷೇತ್ರ ಬದುಕಿದ್ದಾಗಲೇ ದಂತಕಥೆಗಳಂತಿರುವ ಒಂದೊಂದು ಹಿರಿಯ ವ್ಯಕ್ತಿತ್ವಗಳನ್ನು ಕಳೆದುಕೊಳ್ಳುತ್ತಿದೆ. ನಾಡೋಜ ಕಮಲಾ ಅವರನ್ನು ಕಳೆದುಕೊಂಡಿದ್ದು ಸಂಶೋಧನೆ ಹಾಗೂ ವೈಚಾರಿಕಾ ಕ್ಷೇತ್ರಕ್ಕೆ ದೊಡ್ಡ ನಷ್ಟವೇ ಸರಿ.
ಮರಣದಲ್ಲೂ ಹಿರಿಯತನ ತೋರಿರುವ ಕಮಲಾ ಹಂಪನಾ ಹೊರನೋಟಕ್ಕೆ ಆಸ್ತಿಕರಂತೆ ತೋರಿದರೂ ಆಸ್ಪತ್ರೆಗೆ “ದೇಹದಾನ” ಮಾಡುವುದರ ಮೂಲಕ ಆದರ್ಶ ಮೆರೆದರು. ನಿಜವಾದ ಅರ್ಥದಲ್ಲಿ ಕುವೆಂಪು ಅವರ ಪ್ರಿಯ ಶಿಷ್ಯ ಎಂಬುದನ್ನು ನೆನಪಿಸಿದ್ದಾರೆ. ಎಲ್ಲ ಎಲ್ಲೆಗಳನ್ನು ದಾಟಿ ನಿದಿರ್ಂಗತದಲ್ಲಿ ಲೀನವಾಗಿದ್ದಾರೆ. ಅವರನ್ನು ಅವರ ಸಾಧನೆಗಳ ಮೂಲಕ ಮತ್ತೆಮತ್ತೆ ನೆನಪಿಸಿಕೊಳ್ಳುವುದರ ಮೂಲಕ ನಾವು ಜೀವಂತವಾಗಿ ಇರಿಸಿಕೊಳ್ಳಬೇಕಾಗಿದೆ.

LEAVE A REPLY

Please enter your comment!
Please enter your name here

Related Articles

TRENDING ARTICLES