ಪರಿಮಿತವಾದ ಆಸೆ ಇರಬೇಕು ವ್ಯಾಮೋಹ ತೊರೆದ ಸುಖ ಇರಬೇಕು ವಿರಕ್ತಿಯಿಂದ ಕೂಡಿದ ಉದ್ಯೋಗ ಯುಕ್ತಿ ಇರಬೇಕು. ಜೀವನವನ್ನು ಪರೀಕ್ಷಿಸುತ್ತಾ ಸತ್ಯವನ್ನು ಪ್ರೀತಿಸುವ
ಇದು ಕನ್ನಡದ ಭಗವದ್ಗೀತೆಯೆಂದೇ ಜನಜನಿತವಾಗಿರುವ ಮಂಕುತಿಮ್ಮನ ಕಗ್ಗದ ಸಾಲುಗಳು. ಈ ನುಡಿಮುತ್ತಿನೊಂದಿಗೆ ನನ್ನ ಇಂದಿನ ಪ್ರಬಂಧಕ್ಕೆ ಮುನ್ನುಡಿಯನ್ನು ಬರೆಯುತ್ತಿದ್ದೇನೆ.
ಮಹಾತ್ಮ ಗಾಂಧೀಜಿ ಎಂದಾಕ್ಷಣ ನಮ್ಮ ಹೃನ್ಮನಗಳಲ್ಲಿ ಭಕ್ತಿಭಾವದ ಸಂಚಯ. ಏಕೆಂದರೆ ಜಗತ್ತು ಕಂಡ ಅಪರೂಪದ ಮಾಣಿಕ್ಯ. ಅವರು ಒಬ್ಬ ವ್ಯಕ್ತಿ ಮಾತ್ರವಲ್ಲ, ಒಬ್ಬ ಅದ್ಭುತ ಶಕ್ತಿ ಎಂದು ಹೇಳಬಹುದು. ದೇಶ ಕಾಲಗಳನ್ನು ಮೀರಿದ ಅವರು ಬದುಕಿದ್ದಾಗಲೇ ದಂತಕತೆಯಾಗಿದ್ದವರು. ಸತ್ಯ, ಶಾಂತಿ, ಅಹಿಂಸೆ, ಸತ್ಯಾಗ್ರಹ ಎಂಬ ಮಂತ್ರಗಳನ್ನು ಬಳಸಿ “ಮಾಡು ಇಲ್ಲವೇ ಮಡಿ” ಎಂಬ ಧೈಯ ವಾಕ್ಯದೊಂದಿಗೆ ಇಡೀ ಭಾರತವನ್ನು ತಮ್ಮ ಮೋಡಿಗೆ ಒಳಗುಮಾಡಿ ಬ್ರಿಟಿಷರಿಂದ ಭಾರತವನ್ನು ರಕ್ಷಿಸಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟವರಲ್ಲಿ ಅಗ್ರಗಣ್ಯರು. ಇಂತಹ ಮೇರು ಪುರುಷ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ನೀವೇ ಹೇಳಿ.
ಕೈಯಲ್ಲಿ ಒಂದು ಭಗವದ್ಗೀತೆ, ಬಾಯಿಯಲ್ಲಿ ರಾಮರಾಜ್ಯದ ಮಾತುಗಳು: ಹೌದು ಗಾಂಧೀಜಿಯವರ ಬದುಕು ಸರಳ, ನಡೆ ಗಂಭೀರ, ಅಹಿಂಸಾ ತತ್ವ ಗಾಂಧೀಜಿಯವರ ಕಣ್ಣಾಗಿತ್ತು, ಹೃದಯವಾಗಿತ್ತು. ಪರಿಶ್ರಮ, ತ್ಯಾಗ, ಸ್ವಾತಂತ್ರ್ಯ, ಸ್ವಯಂ ಪ್ರೇರಣೆ, ಎಲ್ಲಕ್ಕೂ ಮಿಗಿಲಾಗಿ ಆತ್ಮಸಾಕ್ಷಿ ಗಾಂಧೀಜಿ ದೃಢವಾಗಿ ನಂಬಿದ್ದ ಜೀವನ ಮೌಲ್ಯಗಳು, ನುಡಿಯುವುದು ಸುಲಭ, ನುಡಿದಂತೆ ನಡೆಯುವುದು ಕಷ್ಟ; ಈ ಹೇಳಿಕೆಯನ್ನು ಬುಡಮೇಲು ಮಾಡಿದವರು ಗಾಂಧೀಜಿ. ತಮ್ಮ ಉದಾತ್ತ ಚಿಂತನೆ ಮತ್ತು ಅವುಗಳ ಅನುಷ್ಠಾನದೊಂದಿಗೆ ಇಡೀ ಮಾನವ ಕುಲಕ್ಕೆ ಅನುಕರಣೀಯ ಈ ಮೇರು ಪುರುಷ.
ಕನ್ನಡದ ರಸಋಷಿ, ಮಹಾಕವಿ ಕುವೆಂಪುರವರು ಹೇಳುವಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ನಮ್ಮ ಭವ್ಯ ಭಾರತ ದೇಶವು ಮಹಾತ್ಮ ಗಾಂಧೀಜಿಯವರ ಮುಂದಾಳತ್ವದಲ್ಲಿ ಅಸಂಖ್ಯಾತ ಜನರ ಬೆಂಬಲ, ದೇಶಭಕ್ತರ ಹೋರಾಟ, ತ್ಯಾಗ-ಬಲಿದಾನಗಳಿಂದಾಗಿ 1947 ರ ಆಗಸ್ಟ್
15 ರಂದು ಸ್ವಾತಂತ್ರ್ಯ ಪಡೆಯಿತು. ಹೌದು ಭಾರತಕ್ಕೆ ಸ್ವಾತಂತ್ರ್ಯವೇನೋ ಲಿಭಿಸಿತು. ಆದರೆ ಆ ಸ್ವಾತಂತ್ರ್ಯದ ಅರುಣೋದಯದ ಉಷಾಕಿರಣಗಳನ್ನು ನೋಡುತ್ತಿರುವ ತರುಣದಲ್ಲಿಯೇ ಇವರ ಜೀವನಕ್ಕೆ ಕೊನೆಯೂ ಬಂದಿತು. ಮಹಾನ್ ಚೇತನ ಗಾಂಧೀಜಿಯವರು 1948 ಜನವರಿ 30 ರಂದು ತಮ್ಮ 78ನೇ ವಯಸ್ಸಿನಲ್ಲಿ ಬಿರ್ಲಾ ಹೌಸ್ ಬಳಿ ನಾಥೋರಾಮ್ ಗೋಡ್ಲೆ ಎಂಬ ಹಂತಕನ ಗುಂಡಿಗೆ ಬಲಿಯಾಗಿ ನಿಧನರಾದರು.
ದೇಶಕ್ಕೋಸ್ಕರ ಹೋರಾಡಿದ ಇಂತಹ ಮಹನೀಯರನ್ನು ಇಷ್ಟಪಡದಿರಲು ಸಾಧ್ಯವೇ ?
ಗಾಂಧೀಜಿಯವರು ನನಗೆ ತುಂಬಾ ಇಷ್ಟವಾಗಲು ಕಾರಣವಾಗುವ ಮತ್ತೊಂದು ಚಿಕ್ಕ ಘಟನೆಯನ್ನು ನಿಮ್ಮ ಮುಂದಿಡಲು ಇಷ್ಟಪಡುತ್ತೇನೆ. ವಿಶ್ವಸಂಸ್ಥೆಯಲ್ಲಿ ಪ್ರಪಂಚದ ಯಾವುದೇ ವ್ಯಕ್ತಿ, ಮಹಾತ್ಮರು, ಸಾಧಕರು ಮರಣ ಹೊಂದಿದಾಗ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಎಲ್ಲ ಧ್ವಜಗಳನ್ನು ಅರ್ಧಮಟ್ಟಕ್ಕೆ ಇಳಿಸಿ ಸಂತಾಪ ಸೂಚಿಸಿದ ಉದಾಹರಣೆಗಳಿಲ್ಲ. ಯಾವ ದೇಶದ ಪ್ರಸಿದ್ಧ ವ್ಯಕ್ತಿ ಮರಣ ಹೋಂದುವರೋ ಆ ದೇಶದ ಧ್ವಜವನ್ನು ಮಾತ್ರ ಅರ್ಧ ಮಟ್ಟಕ್ಕೆ ಇಳಿಸಿ ಸಂತಾಪ ಸೂಚಕ ಸಭೆಯನ್ನು ನಡೆಸಲಾಗುತ್ತದೆ. ಆದರೆ ಗಾಂಧೀಜಿ ಮರಣ ಹೊಂದಿದ ದಿನ ವಿಶ್ವಸಂಸ್ಥೆಯಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳ ಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸಿ ಗೌರವ ಸೂಚಿಸಲಾಯಿತು. ಆದರೆ ಯಾವುದೇ ಅಧಿಕಾರದಲ್ಲಿ ಇಲ್ಲದ ಓರ್ವ ವ್ಯಕ್ತಿಗೆ ವಿಶ್ವಸಂಸ್ಥೆ ಅಂದು ನೀಡಿದ ಗೌರವ ಇಲ್ಲಿಯವರೆಗೆ ಇನ್ಯಾವ ನಾಯಕನಿಗೂ ದೊರೆತಿಲ್ಲವೆಂದರೆ ಗಾಂಧೀಜಿಯವರ ಪ್ರಭಾವ ಎಂತಹದು ಎಂಬುದನ್ನು ನಾವು ಅರಿತುಕೊಳ್ಳಬೇಕು ಪತ್ರಕರ್ತರೊಬ್ಬರು ಈ ಬಗ್ಗೆ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್‌ರವರನ್ನು ಕೇಳಿದಾಗ ಅವರು ಹೇಳುತ್ತಾರೆ. “ನಾವು ಗಾಂಧೀಜಿ ಮರಣ ಹೊಂದಿದರೆಂದು ದುಃಖ ಪಡುತ್ತಿಲ್ಲ. ಮಾನವೀಯತೆ ಸತ್ತು ಹೋಯಿತಲ್ಲ ಎಂದು ದುಃಖಿಸುತ್ತಿರುವೆ” ಎಂದು ಹೇಳಿದರಂತೆ.
ಗಾಂಧೀಜಿಯವರನ್ನು ಕೊಲ್ಲಬೇಕಾದರೆ ಮಾನವೀಯತೆ ಸತ್ತು ಹೋಗಿರಬೇಕು ಎನ್ನುತ್ತಾರೆ. ಗಾಂಧೀಜಿಯವರು ಇಷ್ಟವಾಗಲು ಇದಕ್ಕಿಂತಲೂ ಬೇರೆ ಕಾರಣ ಬೇಕೆ ?
ಹೌದು, ಎಲ್ಲಿ ನೋವಿದೆಯೋ, ಎಲ್ಲಿ ಕಣ್ಣೀರಿದೆಯೋ ಅಲ್ಲಿ ಗಾಂಧೀಜಿಯವರು ಇರುತ್ತಿದ್ದರು. ನೊಂದವರ ಕಣ್ಣೀರನ್ನು ಒರೆಸುವ ಕೆಲಸ ಗಾಂಧೀಜಿಯವರಿಗೆ ಪ್ರಧಾನಮಂತ್ರಿ ಪದವಿಗಿಂತ ದೊಡ್ಡದಾಗಿತ್ತು. ಆದುದರಿಂದಲೇ ನೇತಾಜಿ ಸುಭಾಷ್ ಚಂದ್ರ ಬೋಸರು ಬಾಪು, ರಾಷ್ಟ್ರಪಿತ ಎಂದು ಮೊದಲ ಬಾರಿಗೆ ಸಂಬೋಧಿಸಿದರು.
ರವೀಂದ್ರನಾಥ್ ಠಾಗೋರರು ಮಹಾತ್ಮ ಎನ್ನುವ ಗೌರವ ಸೂಚಕ ಪದವನ್ನು ನೀಡಿದರು. ಇವರ ಸ್ವಾತಂತ್ರ್ಯ ಹೋರಾಟ ಕೇವಲ ಬ್ರಿಟಿಷರಿಂದ ಮುಕ್ತಿ ಪಡೆಯುವುದಕ್ಕಷ್ಟೇ ಸೀಮಿತವಾಗಿರಲಿಲ್ಲ.
ಆ ಹೋರಾಟ ನಮ್ಮ ನೆಲವನ್ನು ಬಂಧಿಸಿಟ್ಟಿದ್ದ ಅನೇಕ ಸಂಕೋಲೆಗಳಿಂದ ಮುಕ್ತವಾಗಿಸುವಲ್ಲೂ ನಡೆಯಿತು. ಇಂತಹ ಮಹಾನ್ ವ್ಯಕ್ತಿಯನ್ನು ‘ಮಹಾತ್ಮ’ ಎಂದಲ್ಲದೆ ಬೇರಾವ ಹೆಸರಿನಿಂದ ಕೆರೆಯಲು ಸಾಧ್ಯ. ನೀವೇ ಹೇಳಿ.
“ರಕ್ತ, ಮಾಂಸಗಳು ತುಂಬಿದ್ದ ಗಾಂಧೀಜಿಯಂಥ ಒಬ್ಬ, ಮನುಷ್ಯ ಲೋಕದಲ್ಲಿ ನಡೆದಾಡಿದ್ದ ಎಂದರೆ ಮುಂಬರುವ ಜನಾಂಗಗಳು ಅಚ್ಚರಿ ಪಡುತ್ತವೆ”. ಎಂದು ಆಲ್ಬರ್ಟ್‌ರವರು ಮಹಾತ್ಮರನ್ನು ವರ್ಣಿಸಿದ ಮಾತುಗಳು ನಮ್ಮ ಭಾರತೀಯ ಮನಗಳನ್ನು ಅದಮ್ಯವಾಗಿ ಆವರಿಸಿಕೊಂಡು ಬಿಟ್ಟಿವೆ. ಹೌದು, ಸತ್ಯ ಪರಿಶೋಧನೆಗಾಗಿ ಗಾಂಧೀಜಿಯವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ತಮ್ಮ ತಪ್ಪುಗಳಿಂದಲೇ ಕಲಿತು ಹಾಗೂ ತಮ್ಮ ಮೇಲೆಯೇ
ಪ್ರಯೋಗಗಳನ್ನು ಮಾಡಿಕೊಂಡು ಅವರು ಇದನ್ನು ಸಾಧಿಸಲು ಯತ್ನಿಸಿದರು. ಬ್ರಿಟಿಷರ ಹಿಡಿತದಿಂದ ಭಾರತವನ್ನು ಪಾರು ಮಾಡಿದ ಅಗಣಿತ ಹೋರಾಟಗಾರರಲ್ಲಿ ಗಾಂಧೀಜಿ ಮುಂಚೂಣಿಯಲ್ಲಿದ್ದ ಕಾರಣದಿಂದ ನಮಗೆ ಹೆಚ್ಚು ಚಿರಪರಿಚಿತ. ಸ್ವಾತಂತ್ರ್ಯ ಸಮರದಲ್ಲಿ 1918 ರಿಂದ 1947 ರವರೆಗೆ ಸುಮಾರು 30 ವರ್ಷಗಳಷ್ಟು ಕಾಲ ಪ್ರಶ್ನಾತೀತ ನಾಯಕರಾಗಿ ಮೆರೆದರು. ಅಹಿಂಸೆಯ ಜೊತೆಗೆ ಸತ್ಯಾಗ್ರಹ, ಅಸಹಕಾರಗಳನ್ನು ಬಳಸಿ ಉನ್ನತ ನೈತಿಕ ನೆಲೆಗಟ್ಟಿನಲ್ಲಿಯೇ ಹೋರಾಟ ಮುಂದುವರೆಸಿದರು. ಇಂದು ಸಮಾಜದಲ್ಲಿ ಅಹಿಂಸೆಯ ತತ್ವ ಹೋಗಿ ಹಿಂಸೆಯ ಅಟ್ಟಹಾಸ ವಿಜೃಂಭಣಿಯಿಂದ ನಡೆದಿದೆ. ಈ ದೃಷ್ಟಿಯಿಂದ ಗಾಂಧೀಜಿಯವರು ಇಂದಿಗೂ ವಿಶ್ವಕ್ಕೆ ಹೆಚ್ಚೆಚ್ಚು ಪ್ರಸ್ತುತರಾಗಿದ್ದಾರೆ.
‘ದೇಶ ವಿಭಜನೆಯಾಗುವುದಿದ್ದರೆ, ಅದಕ್ಕಿಂತ ಮೊದಲು ನನ್ನ ದೇಹ ವಿಭಜನೆಯಾಗಲಿ” ಎಂದು ಗುಡುಗಿದ ಗಾಂಧೀಜಿಯವರು ತಮ್ಮ ಚಳುವಳಿಗಳಲ್ಲಿ ಜನರನ್ನು ಒಗ್ಗೂಡಿಸಲು ಪ್ರಯತ್ನ ಪಟ್ಟರೇ ಹೊರತು ಬೇಧಭಾವದಿಂದ ಕಾಣುತ್ತಿರಲಿಲ್ಲ. ತುಂಡಾದ ದೇಶಕ್ಕೋಸ್ಕರ ತಾನು ಹೋರಾಡದೆ ಇದುದರಿಂದ ಗಾಂಧೀಜಿ ಆಗಸ್ಟ್ 15 -1947 ರಂದು ತಮ್ಮ ಆಶ್ರಮದ ಮೇಲೆ ಯಾವ ಬಾವುಟವನ್ನೂ ಹಾರಿಸದೇ, ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿಲ್ಲ. ತನ್ನ ಬಗ್ಗೆ ಯೋಚಿಸದೆ ದೇಶದ ಬಗ್ಗೆ ಯೋಚಿಸುವ ಗಾಂಧೀಜಿಯವರು ನನ್ನ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ.
‘ಎಷ್ಟು ಮತಗಳಿದೆಯೋ ಅಷ್ಟು ಸತ್ಯ. ಸಾಕ್ಷಾತ್ಕಾರದ ಪಥಗಳೇ ಈ ಮತಗಳ ಸಾರಾಂಶ’- “ಸರ್ವಧರ್ಮಗಳಲ್ಲಿಯೂ ಸಮನ್ವಯತೆ ಸಾಧಿಸುವುದೇ ನಮ್ಮ ಧೈಯವಾಗಿರಬೇಕು” ಎಂದು ಸಾರಿದ ಗಾಂಧೀಜಿಯವರು ಎಲ್ಲಾ ಧರ್ಮಗಳನ್ನು ‘ಒಂದು ಬಿಂದುವಿನಲ್ಲಿ ಸೇರುವ ವಿಭಿನ್ನ ಮಾರ್ಗಗಳೆಂದು’ ಬಣ್ಣಿಸಿದವರು.
ಈ ಎಲ್ಲಾ ಧರ್ಮಗಳಿಂದ ಸಾರಭೂತವಾದ ಅಂಶಗಳನ್ನು ಕ್ರೋಢೀಕರಿಸಿ ಹೊಸ
ಧರ್ಮವೊಂದನ್ನು ಸಂಸ್ಥಾಪಿಸಿದರು. ಅದುವೇ ಮಾನವ ಧರ್ಮ. ‘ಮನುಷ್ಯ ಮತ್ತು ಮಾನವನಿಗಿಂತ ಮಿಗಿಲಾದ ದೇವರಿಲ್ಲ’ ಎಂದು ಅವರು ನಂಬಿದ್ದರು. ಈ ಒಂದು ಕಾರಣದಿಂದ ಗಾಂಧೀಜಿಯವರು ನನಗೆ ಅತೀ ಹೆಚ್ಚು ಇಷ್ಟವಾಗುತ್ತಾರೆ. ಪರಧರ್ಮ ಸಹಿಷ್ಣತೆಯನ್ನು ಪ್ರಬಲವಾಗಿ ಪ್ರತಿಪಾದಿಸಿದ ಗಾಂಧೀಜಿ, “ಗುಪ್ತವಾಗಿ ಮನಸ್ಸಿನಲ್ಲೂ ಪರಧರ್ಮದ ಬಗ್ಗೆ ಕೆಟ್ಟದಾಗಿ ಯೋಚಿಸಬಾರದು” ಎಂದರು. “ಎಲ್ಲಾ ಧರ್ಮಗಳನ್ನೂ ಸಮದೃಷ್ಟಿಯಿಂದ ನೋಡುತ್ತಾ ಬೇರೆ ಧರ್ಮಗಳಲ್ಲಿರುವ ಒಪ್ಪಿತ ವೈಶಿಷ್ಟ್ಯಗಳನ್ನು ಎಲ್ಲ ಧರ್ಮಿಯರೂ ಅಳವಡಿಸಿಕೊಳ್ಳಲು ಹಿಂಜರಿಯಬಾರದು” ಎಂದು ಹೇಳಿದರು. ಗಾಂಧೀಜಿಯವರು ಸಂತರಾಗಿ,
ಅಧ್ಯಾತ್ಮ ಸಾಧಕರಾಗಿ, ಯೋಗಿಯಾಗಿ ಬೆಳೆದ ಬಗೆ ಅಥವಾ ಆ ದೃಷ್ಟಿಕೋನದಿಂದ ನೋಡಿದಾಗ ಅವರ ಇನ್ನೊಂದು ವ್ಯಕ್ತಿತ್ವ ನಮಗೆ ಗೋಚರವಾಗುವುದು. ಗಾಂಧೀಜಿ ಒಬ್ಬ ಪ್ರಕೃತಿ ಚಿಕಿತ್ಸೆಯ ಪ್ರಯೋಗಕಾರ, ಸಸ್ಯಹಾರದ ಪ್ರಯೋಗಕಾರ, ‘ನಯೀ ತಾಲಿಂ’ ವಿದ್ಯಾಭ್ಯಾಸ ಪದ್ಧತಿಯ ಪ್ರಯೋಜಕ, ಅಸಾಧಾರಣ ಚಾಣಾಕ್ಯ ರಾಜಕಾರಣಿ, ಸತ್ಯ ಅಹಿಂಸೆಯ ಮೇಲೆ ಜೀವನವಿಡೀ ಪ್ರಯೋಗ ಮಾಡಿದ ಸಾಧಕ, ಹರಿಕಾರ, ಆತ್ಮಸಾಧಕ, ಅಪ್ಪಟ ಕರ್ಮಯೋಗಿ, ಆದರೆ ಇದಾವುದೂ ಗಾಂಧೀಜಿ ಯಾರು ಎಂಬ ಪ್ರಶ್ನೆಗೆ ಉತ್ತರವಾಗುವುದಿಲ್ಲ. ಏಕೆಂದರೆ ಈ ಉತ್ತರಗಳು ಅವರ ಬಹುಮುಖ ವ್ಯಕ್ತಿತ್ವ ಸಾಧನೆ, ಪ್ರಯೋಗಗಳನ್ನಾಗಲೀ ಅವರ ಅಂತಃ ಸತ್ವವನ್ನಾಗಲೀ, ಅವರ ನಿಜವಾದ ಆಧ್ಯಾತ್ಮಿಕ ವ್ಯಕ್ತಿತ್ವವನ್ನಾಗಲೀ ವಿವರಿಸಲಾರವು. ಇವೆಲ್ಲಕ್ಕಿಂತ ಹೆಚ್ಚಾಗಿ ಅವರು, ಅಂತರಂಗದಲ್ಲಿ ಸತ್ಯಾನ್ವೇಷಣೆಗಾಗಿ ಮಾಡಿದ ಸಾಧನೆ ಪ್ರಯೋಗಗಳು ಅಷ್ಟಾಗಿ ಜನರ ಗಮನ ಸೆಳೆದಿಲ್ಲ. ಸ್ವತಃ ಗಾಂಧೀಜಿ ಅವರು ಆ ಕುರಿತು ಹೆಚ್ಚಾಗಿ ಬರೆದಿಲ್ಲ. ಅವರ ಅಂತರಂಗ ಸಾಧನೆಗಳನ್ನು ಕಂಡು ಬರೆದವರು ವಿರಳ. ಇವರ ಈ