ಜುಲೈ 15 ರಂದು ನವೀಕರಣ ಮಾಡಲಾದ ವಿಧಾನಸೌಧದ ಪಶ್ಚಿಮ ದ್ವಾರವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಸ್ತು ಕಾರಣದಿಂದ ಬಂದ್ ಮಾಡಲಾಗಿದ್ದ ಇದೇ ದ್ವಾರದ ಮೂಲಕ ಅಂದು ಸದನವನ್ನು ಪ್ರವೇಶ ಮಾಡಿ, ಮೂಢನಂಬಿಕೆಗೆ ಒಳಗಾಗಬಾರದು ಎಂಬ ಸಂದೇಶವನ್ನು ಜನತೆಗೆ ನೀಡಿದರು.
ಧಾನ ಮಂಡಲದ ಮಳೆಗಾಲದ ( 2024) ಅಧಿವೇಶನ ಇಂದು (ಜುಲೈ 15) ಆರಂಭಗೊಂಡಿದೆ. ಸರ್ಕಾರ ಮತ್ತು ವಿರೋಧ ಪಕ್ಷಗಳ ಜಂಗೀಕುಸ್ತಿಗೆ ಸದನ ಸಾಕ್ಷಿಯಾಗಲಿದೆ. ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣ, ಒಂಬತ್ತು ದಿನಗಳ ಅಧಿವೇಶನದ ಸಮಯವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸೌಧದ ಪಶ್ಚಿಮ ಬಾಗಿಲಿನ ಮೂಲಕ ಪ್ರವೇಶಿಸಿದ್ದಾರೆ. ಕಳೆದ ವರ್ಷ, ಈ ಬಾಗಿಲಿನ ಮೂಲಕ ಎಂಟ್ರಿ ಕೊಟ್ಟು ಹಳೇ ಸಂಪ್ರದಾಯವನ್ನು ಬದಿಗೊತ್ತಿ ಹೊಸ ಹೆಜ್ಜೆ ಮುಂದಿಟ್ಟಿದ್ದರು. ವಿಧಾನಸಭೆ ಅಧಿವೇಶನ ಜುಲೈ 26 ರವರೆಗೆ ನಡೆಯಲಿದೆ.
ಪಶ್ಚಿಮ ದ್ವಾರದ ಮೂಲಕ ವಿಧಾನಸೌಧದ ಕಚೇರಿ ಪ್ರವೇಶಿಸಿ ಸಂತೋಷವಾಗಿದೆ ಎಂದು ಸಿಎಂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ” ವಿಧಾನಸೌಧದ ಪಶ್ಚಿಮ ದ್ವಾರವನ್ನು ನವೀಕರಿಸಲಾಗಿದ್ದು, ನವೀಕೃತ ಬಾಗಿಲನ್ನು ನನನ್ನೂ ಒಳಗೊಂಡಂತೆ, ವಿಧಾನಸಭೆಯ ಅಧ್ಯಕ್ಷ ಯು. ಟಿ.ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕ ಮಿತ್ರರು ಸೇರಿ ಸಂತೋಷದಿಂದ ಉದ್ಘಾಟಿಸಿದ್ದೇವೆ ” ಎಂದು ಸಿಎಂ ಹೇಳಿದ್ದಾರೆ.
ಕಳೆದ ವರ್ಷದ ಜೂನ್ ತಿಂಗಳಲ್ಲಿ ಪಶ್ಚಿಮ ದ್ವಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆಸಿದ್ದರು. ವಾಸ್ತು ಸರಿಯಿಲ್ಲ ಎನ್ನುವ ಕಾರಣದಿಂದ ಬಂದ್ ಮಾಡಲಾಗಿದ್ದ ವಿಧಾನಸೌಧದ ಕಚೇರಿಯ ಪಶ್ಚಿಮ ದ್ವಾರದ ಬೀಗ ತೆರೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಗೆ ಪ್ರವೇಶಿಸಿದ್ದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲೊಂದಾದ, ಅನ್ನಭಾಗ್ಯ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ವಿಧಾನಸೌಧಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು. ಆಗ, ಪಶ್ಚಿಮ ದ್ವಾರ ಬಂದ್ ಆಗಿತ್ತು. ಯಾವ ಕಾರಣಕ್ಕಾಗಿ, ಈ ದ್ವಾರ ಬಂದ್ ಆಗಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ವಾಸ್ತುಮೂಲೆ ಸರಿಯಿಲ್ಲ ಎನ್ನುವ ಉತ್ತರ ಕೊಟ್ಟಿದ್ದರು.
ಇದನ್ನು ಒಪ್ಪದ ಸಿದ್ದರಾಮಯ್ಯ, ಆ ಬಾಗಿಲಲ್ಲೇ ನಿಂತು, ದಕ್ಷಿಣ ದ್ವಾರದ ಮೂಲಕ ಸಿಬ್ಬಂದಿಗಳನ್ನು ಒಳಗೆ ಕಳುಹಿಸಿ, ಪಶ್ಚಿಮ ದ್ವಾರವನ್ನು ತೆರೆಸಿ, ಅಲ್ಲಿಂದಲೇ ಪ್ರವೇಶಿಸಿದ್ದರು. “ಆರೋಗ್ಯಕರ ಮನಸ್ಸು, ಸ್ವಚ್ಛ ಹೃದಯ, ಜನಪರ ಕಾಳಜಿ, ಒಳ್ಳೆ ಗಾಳಿ-ಬೆಳಕು ಬರುವಂತಿದ್ದರೆ, ಅದಕ್ಕಿಂತ ಉತ್ತಮ ವಾಸ್ತು ಇಲ್ಲ ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.