ವಿಶ್ವದ ಅತಿ ಎತ್ತರದ ಈ ಶಿಖರವನ್ನು ಏರಿದ ಮೆಸೂರಿನ ಎರಡನೇ ಮಹಿಳೆ ಇವರು, ಈ ಹಿಂದೆ 2017 ರಲ್ಲಿ ಮೈಸೂರಿನವರೇ ಆದ ಸ್ಮಿತಾ ಲಕ್ಷ್ಮಣ್ ಅವರು ಈ ಸಾಧನೆ ಮಾಡಿದ್ದರು. ಸ್ಮಿತಾ ಲಕ್ಷ್ಮಣ್ ಅವರು ಸೇನಾಧಿಕಾರಿ. ಆದರೆ ಮೈಸೂರಿನ ಜೆಎಸ್ಎಸ್ ಡೆಂಟಲ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಉಷಾ ಹೆಗ್ಡೆ ಅವರು ನಾಗರೀಕ ಮಹಿಳೆಯಾಗಿ ಸಾಧನೆ ಮಾಡಿರುವುದು ವಿಶೇಷವಾಗಿದೆ.
1984 ರಲ್ಲಿ ಮೌಂಟ್ ಎವರೆಸ್ಟ್ ಅನ್ನು ಏರಿದ ಬಜೇಂದ್ರಿ ಪಾಲ್ ಅವರು ಈ ಶಿಖರವನ್ನು ಏರಿದ ಮೊದಲ ಮಹಿಳೆ ಎನಿಸಿಕೊಂಡಿದ್ದರು. ಅದರ 40 ನೇ ವರ್ಷಾಚರಣೆಯ ಸಂದರ್ಭದಲ್ಲಿಯೇ ಡಾ. ಉಷಾ ಹೆಗ್ಡೆ ಅವರು ಎವರೆಸ್ಟ್ ಏರಿ, ಆ ದಿನವನ್ನು ಸ್ಮರಣೀಯವಾಗಿಸಿದ್ದಾರೆ.
ಏವರೆಸ್ಟ್ ಏರಲು ಕನಿಷ್ಠ 40-45 ದಿನಗಳು ಬೇಕಾಗುತ್ತದೆ. ಇದಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. 52 ವರ್ಷದ ಉಷಾ ಹೆಗ್ಡೆ ಅವರು ಈ ಸಾಧನೆ ಮಾಡುವ ನಿಟ್ಟಿನಲ್ಲಿ ಮೈಸೂರಿನಿಂದ ಹಿಮಾಲಯದತ್ತ ಹೊರಟರು. ನೇಪಾಳದ ಕಂಠಂಡುವಿನಲ್ಲಿ ಪ್ರಾಥಮಿಕ ಸಿದ್ಧತೆಗಳನ್ನು ಮುಗಿಸಿದರು. ನಂತರ ಬೇಸ್ ಕ್ಯಾಂಪಿನಲ್ಲಿ ಒಂದು ತಿಂಗಳ ತರಬೇತಿಯನ್ನು ಪಡೆದರು.
ಈ ವರ್ಷದ ಏಪ್ರಿಲ್ 4 ರಂದು ಪರ್ವತಾರೋಹಣ ಆರಂಭಿಸಿದ ಅವರು ಮೇ 19 ರಂದು ಬೆಳಗ್ಗೆ 6.10ಕ್ಕೆ ಮೌಂಟ್ ಎವರೆಸ್ಟ್‌ನ 29,031 ಅಡಿ ಎತ್ತರದ ತುತ್ತ ತುದಿಯನ್ನು ತಲುಪಿ, ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಮೈಸೂರಿನ ಹಾಗೂ ತಾವು ಸೇವೆ ಸಲ್ಲಿಸುತ್ತಿರುವ ಜೆಎಸ್ಎಸ್ ಡೆಂಟಲ್ ಕಾಲೇಜಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಡಾ. ಉಷಾ ಹೆಗ್ಡೆ ಅವರೊಂದಿಗೆ ಮಾರ್ಗದರ್ಶಿಯಾಗಿ ಪುರ್ಬ ಸೆಪ್ರ ಅವರು ಜೊತೆಯಾಗಿದ್ದರು.
ಉಷಾ ಹೆಗ್ಡೆ ಅವರು ಸಾಗಿದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಬದಲಿಗೆ ಕಲ್ಲು-ಮುಳ್ಳಿನ ಹಾದಿ. 17,598 ಅಡಿ ಎತ್ತರದ ಬೇಸ್ ಕ್ಯಾಂಪ್‌ನಲ್ಲಿ ಕಠಿಣ ತರಬೇತಿ ಪಡೆದು, ತಮ್ಮ ಗುರಿ ಸಾಧನೆಗೆ ಸಿದ್ಧವಾದರು. ನಂತರ 19.685 ಅಡಿ ಎತ್ತರದ ಮೊದಲ ಕ್ಯಾಂಪ್ ತಲುಪಿ ಮುಂದಿನ ಹಂತಕ್ಕೆ ಸಜ್ಜಾದರು. ನಂತರ ಕಠಿಣವಾದ 21,000 ಅಡಿಯ ಎರಡನೇ ಕ್ಯಾಂಪ್ ತಲುಪಿದರು. ಹಾಗೆಯೇ ಮುಂದುವರೆದು 23.625 ಅಡಿಯ ಮೂರನೇ ಕ್ಯಾಂಪ್, 26.085 ಅಡಿಯ ನಾಲ್ಕನೇ ಕ್ಯಾಂಪ್ ತಲುಪಿದರು. ಮುಂದಕ್ಕೆ ದುರ್ಗಮವಾದ ಹಾದಿಯನ್ನು ಸವೆಸಿ, ಅಂತಿಮವಾಗಿ 29.029 ಅಡಿಯ ಎವರೆಸ್ಟ್ ಶಿಖರ [ಸಮ್ಮಿಟ್] ತಲುಪಿದರು.
ಇನ್ನು ಡಾ. ಉಷಾ ಹೆಗ್ಡೆ ಅವರ ವೈಯಕ್ತಿಕ ವಿಚಾರದ ಕುರಿತು ಮಾಹಿತಿ ಕಲೆ ಹಾಕಿದಾಗ ತಿಳಿದು ಬಂದ ವಿಷಯವೆಂದರೆ, ಬೆಂಗಳೂರಿನ ಎಸ್. ಚಿಕ್ಕಪ್ಪ ಮತ್ತು ಗಿರಿಜಾ ಅವರ ಪುತ್ರಿ. 1972 ರಲ್ಲಿ ಜನನ, ಪಿಯುಸಿವರೆಗೆ ಬೆಂಗಳೂರಿನಲ್ಲಿಯೇ ವ್ಯಾಸಂಗ. ನಂತರ ಮೈಸೂರಿನ ಜೆಎಸ್ಎಸ್ ಡೆಂಟಲ್ ಕಾಲೇಜಿನಲ್ಲಿ ಬಿಡಿಎಸ್ ಪದವಿ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಡೆಂಟಲ್ ಕಾಲೇಜಿನಲ್ಲಿ ಓರಲ್ ಪೆಥಾಲಜಿ ಮತ್ತು ಮೈಕ್ರೋ ಬಯಲಾಜಿಯಲ್ಲಿ ಎಂಡಿಎಸ್ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ.
1998 ರಲ್ಲಿ ಮೈಸೂರಿನ ಜೆಎಸ್ಎಸ್ ಡೆಂಟಲ್ ಕಾಲೇಜಿನ ಓರಲ್ ಪೆಥಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಆರಂಭ. ಹಂತ ಹಂತವಾಗಿ ಮೇಲೇರಿ ಈಗ ಅದೇ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ.
ಮೈಸೂರಿನ ಹೆಸರಾಂತ ವೆದ್ಯರಾದ ಡಾ. ಜಿ.ಎಸ್. ಹೆಗ್ಡೆ ಅವರ ಪುತ್ರ ಡಾ. ಅಜಯ್ ಹೆಗ್ಡೆ ಅವರೊಂದಿಗೆ ವಿವಾಹ, ಆಕರ್ಷ್ ಹಾಗೂ ಆರ್ಯನ್ ಎಂಬ ಇಬ್ಬರು ಪುತ್ರರು. ಮೊದಲ ಪುತ್ರ ಎಂಬಿಬಿಎಸ್ ಪೂರೈಸಿ, ಹೌಸ್ ಸರ್ಜನ್ ಆಗಿದ್ದಾರೆ. ಎರಡನೇ ಪುತ್ರ ಕೂಡ ಎಂಬಿಬಿಎಸ್ ಓದುತ್ತಿದ್ದಾರೆ.
ಡಾ. ಉಷಾ ಹೆಗ್ಡೆ ಅವರು ಮೌಂಟ್ ಎವರೆಸ್ಟ್ ಶಿಖರ ಏರಿದ್ದು ಮೈಸೂರಿನ ಸುತ್ತೂರು ಶ್ರೀಮಠಕ್ಕೂ ಹೆಗ್ಗಳಿಕೆಯ ವಿಷಯವಾಗಿದೆ. ಅವರು ಕೆಲಸ ಮಾಡುವ ಜೆಎಸ್ಎಸ್ ಡೆಂಟಲ್ ಕಾಲೇಜಿನವರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಾನಿಧ್ಯದಲ್ಲಿ ಸನ್ಮಾನಿಸಿ, ಸಂತಸ ಪಟ್ಟಿದ್ದಾರೆ.
ಪರ್ವತಾರೋಹಣಕ್ಕಾಗಿ ಸತತ ಎರಡೂವರೆ ವರ್ಷಗಳಿಂದ ತಯಾರಿ
ಡಾ. ಉಷಾ ಹೆಗ್ಡೆ ಅವರು ಮೌಂಟ್ ಎವರೆಸ್ಟ್ ಏರಲು ಕಳೆದ ಎರಡೂವರೆ ವರ್ಷಗಳಿಂದಲೂ ತಯಾರಿ ನಡೆಸಿದ್ದರಂತೆ. ಮೈಸೂರಿನ ವರ್ತುಲ ರಸ್ತೆಯಲ್ಲಿ ಓಡುವುದು, ಜಿಮ್‌ನಲ್ಲಿ ವರ್ಕೌಟ್ ಮಾಡುವ ಜೊತೆಗೆ ಪ್ರಾಣಾಯಾಮ ಕೂಡ ಮಾಡುತ್ತಿದ್ದೆ. ಪ್ರತಿನಿತ್ಯ ಚಾಮುಂಡಿಬೆಟ್ಟವನ್ನು ಹತ್ತಿ ಇಳಿದು ಅಭ್ಯಾಸ ಮಾಡಿದೆ. ಪರ್ವತಾರೋಹಣಕ್ಕೆ ನಮ್ಮ ಲಗೇಜ್ ಕೂಡ ನಾವೇ ಹೊರಬೇಕಾಗುತ್ತದೆ. ಅದಕ್ಕೂ ಕೂಡ ತಯಾರಿ ನಡೆಸಿದೆ. ಪ್ರತಿನಿತ್ಯ ಲಗೇಜ್‌ನ ತೂಕವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸಿಕೊಂಡು ಚಾಮುಂಡಿ ಬೆಟ್ಟ ಹತ್ತಿ ಇಳಿಯುವ ಮೂಲಕ ಮೌಂಟ್ ಎವರೆಸ್ತೆ ಶಿಖರವನ್ನು ಏರಲು ಸಜ್ಜಾದೆ ಎಂದು ತಮ್ಮ ತಯಾರಿಯ ಬಗ್ಗೆ ವಿವರಿಸಿದರು.
ಎವರೆಸ್ಟ್ ಏರಲು ಶೇ.40 ರಷ್ಟು ದೈಹಿಕ ಸಾಮರ್ಥ್ಯಬೇಕಾದರೆ, ಶೇ. 60 ರಷ್ಟು ಮಾನಸಿಕ ಧೈರ್ಯ ಬೇಕು ಎನ್ನುತ್ತಾರೆ ಉಷಾ ಹೆಗ್ಡೆ, ನೇಪಾಳಿ ಜನತೆ ಎವರೆಸ್ಟ್ ಅನ್ನು ಸಾಗರಮಾತಾ ಎಂದು ಕರೆಯುತ್ತಾರೆ. ಚಾಮುಂಡಿಬೆಟ್ಟದಿಂದ ಸಾಗರಮಾತಾವರೆಗೆ ತಲುಪಿ, ಸುರಕ್ಷಿತವಾಗಿ ವಾಪಸ್ ಆಗಿದ್ದೇನೆ. ನನ್ನ ಈ ಸಾಧನೆಗೆ ನನ್ನ ಸಹೋದ್ಯೋಗಿಗಳು ಮತ್ತು ಕುಟುಂಬದವರ ಸಹಕಾರ ಕೂಡ ಕಾರಣ ಎಂದು ಅವರು ಸಂತಸವನ್ನು ಹಂಚಿಕೊಂಡರು.