ವಿಶ್ವದ ಭೂಪಟದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನ. ಇದು ಸಿಲಿಕಾನ್ ಸಿಟಿ, ಗಾರ್ಡನ್ ನಗರಿ, ಮಾಹಿತಿತಂತ್ರಜ್ಞಾನದ ತೊಟ್ಟಿಲು. ವರ್ಷದ ಬಹುತೇಕ ತಿಂಗಳು. ಇಲ್ಲಿರುವುದು ಸಹನೀಯ ಹವಾಮಾನ. ಅರ್ಧಕ್ಕರ್ಧ ನಗರವನ್ನು ಸುತ್ತುವರಿದಿರುವ ಮೆಟ್ರೊರೈಲು, ವರ್ತುಲ ರಸ್ತೆಗಳು, ಎಕ್ಸಪ್ರೆಸ್ ಹೈವೆ, ವಿಶ್ವದರ್ಜೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ… ಹೀಗೆ ಇಲ್ಲಿ ಜಗತ್ತಿನ ಅನೇಕ ನಗರಿಗಳಿಗೆ ಹೆಗಲೆಣೆಯಾಗಿ ನಿಲ್ಲುವ ಮೂಲಸೌಕರ್ಯಗಳು, ಬಹುಶಃ ಬೆಂಗಳೂರೆಂಬ ಸುಂದರಿಯನ್ನು ಇಷ್ಟಪಡದೇ ಇರಲು ಕಾರಣಗಳು ವಿರಳ!
ನಮ್ಮ ದೇಶದ ಅನೇಕ ನಗರಗಳ ಜೊತೆಗೆ ಪೈಪೋಟಿಗೆ ನಿಲ್ಲುವ ಇಂತಹ ವಿಶ್ವಮಟ್ಟದ ಶಹರಿಗೆ ಇನ್ನೊಂದು ಸೌಲಭ್ಯ ಈಗ ಸೇರ್ಪಡೆಯಾಗುತ್ತಿದೆ.
“ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗಿನ 3.36 ಕಿ.ಮೀ. ಉದ್ದದ ಡಬ್ಬಲ್ ಡೆಕ್ಕರ್ ರಸ್ತೆಗೆ 450 ಕೋಟಿ ರೂ. ವೆಚ್ಚವಾಗಿದೆ. ಇದರ ಗುಣಮಟ್ಟ ವಿಶ್ವದರ್ಜೆಯದ್ದು, ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ರಸ್ತೆಗಳನ್ನು ನಿರ್ಮಿಸುವ ಯೋಜನೆ ನಮ್ಮ ಮುಂದೆ ಇದೆ.”
ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
ಅದು ಡಬ್ಬಲ್ ಡೆಕ್ಕರ್ ರಸ್ತೆ. ಅರ್ಥಾತ್ ರೋಡ್‌ಮ್ ರೈಲುರಸ್ತೆ. ಮೇಲ್ಬಾಗದಲ್ಲಿ ಮೆಟ್ರೋ ಹಳದಿ ರೈಲು ಮಾರ್ಗ. ಕೆಳಗೆ ಇಕ್ಕೆಲೆಗಳಲ್ಲಿ ಎಲವೇಟೆಡ್ ರಸ್ತೆಗಳು. ನೆಲಮಟ್ಟದಲ್ಲಿಯೂ ಎಡ-ಬಲ ಭಾಗಗಳಲ್ಲಿ ಎರಡು ರಸ್ತೆಗಳು. ಯಾವುದೇ ಅಡೆ- ತಡೆಗಳಿಲ್ಲದೆ ಸುಗಮ ಸಂಚಾರ. ಇದು ಸಾಧ್ಯವಾಗಿರುವುದು ದಕ್ಷಿಣ ಬೆಂಗಳೂರಿನ ರಾಗಿಗುಡ್ಡ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಡುವೆ. ಇದರ ಒಟ್ಟು ಉದ್ದ 3.6 ಕಿ.ಮೀ. ರೈಲು ಮತ್ತು ವಾಹನ ಸಂಚಾರ ಸುಲಲೀತ. ಇಂತಹ ಡಬಲ್ ಡೆಕ್ಕರ್ ರಸ್ತೆ ಸೌಲಭ್ಯ ಹೊಂದುತ್ತಿರುವ ದಕ್ಷಿಣ ಭಾರತದ ಮೊದಲ ನಗರ ಬೆಂಗಳೂರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಗಳು, ಪ್ರೈಓವರ್‌ಗಳನ್ನು ನಿರ್ಮಿಸುವ ಮೂಲಕ ಬೆಂಗಳೂರು ನಗರವನ್ನು ವಿಶ್ವದರ್ಜೆಗೆ ಏರಿಸಬೇಕು ಎಂಬ ಸಂಕಲ್ಪ ರಾಜ್ಯ ಸರ್ಕಾರದ್ದು, ಅದಕ್ಕೆ ಬಹುದೊಡ್ಡ ಮೈಲಿಗಲ್ಲಾಗಿದೆ ಬ್ರಾಂಡ್ ಬೆಂಗಳೂರು ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗಿರುವ ಈ ಪ್ರತಿಷ್ಠಿತ ಡಬ್ಬಲ್ ಡೆಕ್ಕರ್ ರಸ್ತೆ. ಬೆಂಗಳೂರು ಎಂತಹ ಸಿಲಿಕಾನ್ ಸಿಟಿಯಾದರೂ ಇಲ್ಲಿನ ಟ್ರಾಫಿಕ್ ಜಂಜಾಟದ ಬಗ್ಗೆ ಜನರಂತೂ ಹಿಡಿಶಾಪ ಹಾಕುತ್ತಿದ್ದರು. ಇನ್ನು ಮುಂದೆ ನಿಟ್ಟುಸಿರು ಬಿಡುವಂತಾಗಿದೆ. ನಗರದ ಅನೇಕ ಜಂಕ್ಷನ್‌ಗಳು ಯಾವತ್ತೂ ವಾಹನ ದಟ್ಟಣೆಯಿಂದ ತುಂಬಿ ಹೋಗುತ್ತಿದ್ದವು. ಇದರಿಂದಾಗಿ ಮೂರು-ನಾಲ್ಕು ಕಿ.ಮೀ. ಕ್ರಮಿಸಲು ಬರೋಬ್ಬರಿ 35 ರಿಂದ 45 ನಿಮಿಷಗಳು ಬೇಕಾಗಿತ್ತು. ಬೆಳಿಗ್ಗೆ ಆಫೀಸಿಗೆ ಹೋಗುವ ಧಾವಂತದಲ್ಲಿ ಇದ್ದವರ ಕಷ್ಟ ಹೇಳ ತೀರದು. ಒಂದಡಿಯೂ ಮುಂದಕ್ಕೆ ಚಲಿಸದ ಹಾಗೆ ವಾಹನಗಳು ತಾಸುಗಟ್ಟಳೆ ನಿಂತು ಬಿಡುವ ಪ್ರಕರಣಗಳು ಹೊಸದೇನೂ ಅಲ್ಲ. ಅಂತಹ ಜಂಕ್ಷನ್‌ಗಳಲ್ಲಿ ಒಂದೆಂದರೆ ಸಿಲ್ಕ್ ಬೋರ್ಡ್ ಜಂಕ್ಷನ್, ಇಲ್ಲಿ ಪೀಕ್ ಹವರ್‌ಗಳಲ್ಲಿ ಕನಿಷ್ಠ ಹದಿನೈದು ಸಾವಿರಕ್ಕೂ ಹೆಚ್ಚು ವಾಹನಗಳು ಹಾದು ಹೋಗುತ್ತವೆ ಎಂದು ಅಂದಾಜು ಮಾಡಲಾಗಿದೆ. ಯಾಕೆಂದರೆ ಬೆಂಗಳೂರಿನಲ್ಲಿಯೇ ಅತ್ಯಂತ ಪ್ರಮುಖ ಜಂಕ್ಷನ್, ಅನೇಕ ಐಟಿ ಹಬ್ ಗಳಿಗೆ ಇದು ರಾಜಮಾರ್ಗ. ಎಚ್.ಎಸ್.ಆರ್ ಬಡಾವಣೆ. ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರು, ಹೊಸೂರು ರಸ್ತೆ (ರಾಷ್ಟ್ರೀಯ ಹೆದ್ದಾರಿ-44), ಮಹದೇವಪುರ, ಕನಕಪುರ ಮೊದಲಾದ ಕಡೆಗಳಿಗೆ ಇದು ಲಿಂಕ್ ಜಂಕ್ಷನ್.