ಕರ್ನಾಟಕದಲ್ಲಿ ಕ್ಷೀರಧಾರೆ
5ಕರ್ನಾಟಕ ರಾಜ್ಯದಲ್ಲೀಗ ಹಾಲಿನ ಹೊಳೆ ಉಕ್ಕೇರಿದೆ. ರಾಜ್ಯ ಸರ್ಕಾರದ ಸಹಕಾರಿ ವಲಯದ ಕರ್ನಾಟಕ ಹಾಲು ಮಹಾಮಂಡಲಿ (ಕೆಎಂಎಫ್) ಸಂಗ್ರಹಿಸುತ್ತಿರುವ ಹಾಲಿನ ಪ್ರಮಾಣ ಮೊಟ್ಟಮೊದಲ ಬಾರಿಗೆ ಜುಲೈ 2 ರಂದು ದಿನಕ್ಕೆ 1 ಕೋಟಿ ಲೀಟರುಗಳನ್ನು ತಲುಪಿ ಸಾರ್ವಕಾಲಿಕ ದಾಖಲೆ ಬರೆದಿದೆ. ಇದರೊಂದಿಗೆ, ರೈತರ ಬೆನ್ನೆಲುಬಾಗಿ ಕಾರ್ಯಾಚರಿಸುತ್ತಿರುವ ಕೆಎಂಎಫ್ ಹೆಚ್ಚು ಹಾಲು ಸಂಗ್ರಹಣೆಯಲ್ಲಿ ಇಡೀ ದೇಶದಲ್ಲಿ ಎರಡನೇ ಸ್ಥಾನಕ್ಕೇರಿದೆ (ಅಮುಲ್ ನಂತರ). ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ಹಸು ಹಾಗೂ ಕರುವಿಗೆ ಪೂಜೆ ಸಲ್ಲಿಸಿ ಗೋಮಾತೆಗೆ ನಮಿಸುವ ಮೂಲಕ ಈ ಸಂಭ್ರಮವನ್ನು ಆಚರಿಸಲಾಗಿದೆ. ಕಳೆದ ಸುಮಾರು ಮೂರು ತಿಂಗಳುಗಳಿಂದ ಹಾಲು ಉತ್ಪಾದನೆಯಲ್ಲಿ ಆಗುತ್ತಿರುವ ಹೆಚ್ಚಳದಿಂದಾಗಿ ಇದು ಸಾಧ್ಯವಾಗಿದೆ. ಹೋದ ವರ್ಷದ ಜೂನ್ ತಿಂಗಳಲ್ಲಿ ಸರಿಸುಮಾರು ದಿನವೊಂದಕ್ಕೆ 90 ಲಕ್ಷ ಲೀಟರುಗಳಷ್ಟಿದ್ದ ಹಾಲು ಸಂಗ್ರಹಣೆ ಪ್ರಮಾಣ ಇದೀಗ ಶೇಕಡಾ 15 ರಷ್ಟು ಏರಿಕೆಯಾಗಿದ್ದು, 100 ಲಕ್ಷ ಲೀಟರುಗಳನ್ನು (1 ಕೋಟಿ ಲೀ.) ಮುಟ್ಟಿದೆ. ಹಿಂದಿನ ಹತ್ತು ವರ್ಷಗಳಿಗೆ ಹೋಲಿಸಿದರೂ ಈ ಹೆಚ್ಚಳ ಇದೇ ಪ್ರಮಾಣದಲ್ಲಿರುವುದು ಕಂಡು ಬರುತ್ತದೆ.
ಕೆಎಂಎಫ್ ಸುಮಾರು 16,000 ಹಾಲಿನ ಡೈರಿಗಳು ಹಾಗೂ 15 ಹಾಲು ಒಕ್ಕೂಟಗಳನ್ನು ಒಳಗೊಂಡು ಕಾರ್ಯಾಚರಿಸುತ್ತಿರುವ ಸಂಸ್ಥೆಯಾಗಿದೆ. ಇದರ ವ್ಯಾಪ್ತಿಯಲ್ಲಿರುವ ಹೆಚ್ಚು ಕಡಿಮೆ 27 ಲಕ್ಷ ರೈತರ ಪೈಕಿ. ಸದ್ಯ ಅಂದಾಜು 8 ಲಕ್ಷ ರೈತರು ಹಾಲು ಉತ್ಪಾದನೆ- ಪೂರೈಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇದನ್ನು ತಮ್ಮ ಜೀವನೋಪಾಯ ಹಾಗೂ ಆದಾಯದ ಮೂಲವಾಗಿಸಿಕೊಂಡಿದ್ದಾರೆ.
ಪ್ರಮುಖವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಮಂಡ್ಯ, ಕೋಲಾರ ಮತ್ತು ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಹಾಲಿನ ಉತ್ಪಾದನೆ ಅಧಿಕವಾಗಿರುವುದು ಈ ಮೈಲುಗಲ್ಲಿನ ಸಾಧನೆಗೆ ಹೆಚ್ಚಿನ ಕೊಡುಗೆ. ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರಗಳನ್ನು ಒಳಗೊಂಡ ‘ಬಮುಲ್’ ಪ್ರತಿದಿನ 16.97 ಲಕ್ಷ ಲೀಟರ್ ಹಾಲು ಸಂಗ್ರಹಿಸಿ ಅಗ್ರಸ್ಥಾನದಲ್ಲಿದ್ದರೆ, ಹಾಸನ ಜಿಲ್ಲೆಯ ‘ಹಮುಲ್’ 14.91 ಲಕ್ಷ ಲೀಟರುಗಳೊಂದಿಗೆ ಎರಡನೇ ಹಾಗೂ ಕೋಲಾರ ಜಿಲ್ಲೆ ವ್ಯಾಪ್ತಿಯ ‘ಕೋಮುಲ್’ 12.30 ಲಕ್ಷ ಲೀಟರುಗಳೊಂದಿಗೆ ಮೂರನೇ ಸ್ಥಾನದಲ್ಲಿವೆ.
ಕಳೆದ ಸಾಲಿನ ತೀವ್ರ ಬರದ ನಂತರ ಈ ವರ್ಷ ಮುಂಗಾರು ಪೂರ್ವ ಮಳೆ ಸಾಕಷ್ಟು ಪ್ರಮಾಣದಲ್ಲಿ ಸುರಿದಿದ್ದು, ಆಮೇಲೆ ಮುಂಗಾರು ಮಳೆ ಕೂಡ ಸಮಾಧಾನಕರ ಎನ್ನುವಂತೆ ಬೀಳುತ್ತಿರುವುದರಿಂದ ಹಸಿರು ಮೇವಿನ ಲಭ್ಯತೆ ಹೆಚ್ಚಿರುವುದು ಈ ಹೆಚ್ಚಳಕ್ಕೆ ಮುಖ್ಯ ಕಾರಣವೆನ್ನಲಾಗಿದೆ. ಇದರ ಜೊತೆಗೆ, ಜಾನುವಾರಗಳಲ್ಲಿ ಚರ್ಮರೋಗಗಳ ಬಾಧೆ ಇಳಿಮುಖವಾಗಿರುವುದೂ ಇದಕ್ಕೆ ಪೂರಕವಾಗಿರಬಹುದು ಎಂದು ಊಹಿಸಲಾಗಿದೆ.
ಸರ್ಕಾರವು ಹಾಲು ಉತ್ಪಾದಕರಿಗೆ ನೀಡುತ್ತಿರುವ ಉತ್ತೇಜಕ ಕ್ರಮವು ಹೆಚ್ಚಿನ ರೈತರು ಹೈನೋತ್ಪಾದನೆಯಲ್ಲಿ ತೊಡಗಲು ಪ್ರೇರಣೆಯಾಗಿದೆ ಎಂಬ ಅಭಿಪ್ರಾಯ ಕೂಡ ಕೇಳಿ ಬಂದಿದೆ. ಕೆಎಂಎಫ್ ವತಿಯಿಂದ ಒಂದು ಕೋಟಿ ಲೀಟರ್ ಹಾಲಿನ ಸಂಗ್ರಹದ ಸಂಭ್ರಮಾಚರಣೆಯ ಅಂಗವಾಗಿ ಗೋ ಪೂಜೆ ಸಲ್ಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ದಾಖಲೆ ಮಟ್ಟದ ಹಾಲು ಉತ್ಪಾದನೆಗೆ ಕಾರಣವಾಗಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕಾದ ಸನ್ನಿವೇಶವನ್ನು ಇದು ಸೃಷ್ಟಿಸಿದೆ. ರೈತರು ಉತ್ಪಾದಿಸುತ್ತಿರುವ ಹಾಲನ್ನು ಕೊಳ್ಳಲಾಗದು ಎಂದರೆ ನಾವು ಅವರನ್ನು ಬೆಂಬಲಿಸಿದಂತಾಗುವುದಿಲ್ಲ. ಹೀಗಾಗಿ, ನಾವು ಹೈನೋತ್ಪಾದನೆಯಲ್ಲಿ ತೊಡಗಿರುವ ರೈತರು ಉತ್ಪಾದಿಸುತ್ತಿರುವ ಎಲ್ಲಾ ಹಾಲನ್ನೂ ಖರೀದಿಸಿ ಅವರಿಗೆ ಒತ್ತಾಸೆಯಾಗಿ ನಿಂತಿದ್ದೇವೆ. ಇದು ಸರ್ಕಾರದ ರೈತಪರ ಬದ್ಧತೆಯೂ ಆಗಿದೆ” ಎಂದು ಒತ್ತಿ ಹೇಳಿದ್ದಾರೆ. ಅಂದಂತೆ, ಕೆಎಂಎಫ್ ಪ್ರತಿದಿನ ಸುಮಾರು 30 ಲಕ್ಷ ಲೀಟರುಗಳಷ್ಟು .
ಹಾಲನ್ನು ಪೌಡರ್ ಆಗಿ ಪರಿವರ್ತಿಸಲು ಬಳಸುತ್ತಿದೆ. ಕೆಎಂಎಫ್ ಅಧ್ಯಕ್ಷರಾದ ಭೀಮಾ ನಾಯ್ಕ ಅವರು ಹೇಳುವ ಪ್ರಕಾರ, ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿದರೆ ಅದು ನಷ್ಟದ ಬಾಬತ್ತಾಗುತ್ತದೆ. “ಹೀಗಾಗಿ, ಹೆಚ್ಚುವರಿ ಹಾಲಿಗೆ ಮಾರುಕಟ್ಟೆ ಕಂಡುಕೊಳ್ಳುವುದಕ್ಕಾಗಿ ಈಗ ಕೆಎಂಎಫ್ ತಾನು ಮಾರಾಟ ಮಾಡುವ ಅರ್ಧ ಲೀಟರ್ ಮತ್ತು ಒಂದು ಲೀಟರ್ ಹಾಲಿನ ಪ್ರಮಾಣವನ್ನು ಕ್ರಮವಾಗಿ 550 2.. 5 1050 2..パ ಹೆಚ್ಚಿಸಿದೆ. ಇದೇ ಅನುಪಾತದಲ್ಲಿ ಹಾಲಿನ ದರವನ್ನೂ ಹೆಚ್ಚಿಸಿದರೆ 50 ಮಿ.ಲೀ.ಗೆ 2.10 ರೂಪಾಯಿ ಹೆಚ್ಚಿಸಬೇಕಾಗುತ್ತದೆ. ಆದರೆ, ಬೆಲೆಯನ್ನು 2 ರೂಪಾಯಿ ಹೆಚ್ಚಿಸಿ ಉಳಿದ 10 ಪೈಸೆ ಹೊರೆಯನ್ನು ಕೆಎಂಎಫ್ ತನ್ನ ಪಾಲಿಗೆ ವಹಿಸಿಕೊಂಡಿದೆ” ಎಂದು ವಿವರಿಸುವ ಅವರು, ನಂದಿನಿ ಹಾಲಿಗೆ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಉದ್ದೇಶದಿಂದ ಬೇರೆ ರೀತಿಯ ಪ್ರಯತ್ನಗಳೂ ನಡೆಯುತ್ತಿವೆ ಎಂದು ತಿಳಿಸುತ್ತಾರೆ.
ಇದೇ ಸಂದರ್ಭದಲ್ಲಿ ಕೆಎಂಎಫ್ ಮಾರಾಟದಲ್ಲಿಯೂ ಇತಿಹಾಸ
ಸೃಷ್ಟಿಸಿದೆ. ಅಂಕಿಅಂಶಗಳ ಪ್ರಕಾರ, ಇದೇ ಏಪ್ರಿಲ್ 6 ರಂದು 13.56 ಲಕ್ಷ ಲೀಟರುಗಳಷ್ಟು ಮೊಸರು ಹಾಗೂ ಏಪ್ರಿಲ್ 11ರಂದು 51.60 ಲಕ್ಷ ಲೀಟರುಗಳಷ್ಟು ಹಾಲು ಮಾರಾಟವಾಗಿರುವುದು ಗರಿಷ್ಠ ದಾಖಲೆಯಾಗಿದೆ. ಬೇಸಿಗೆ ಋತುವಿನಲ್ಲಿ ಹಾಲು ಮತ್ತಿತರ ಹೈನೋತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವುದು ಇದಕ್ಕೆ ಕಾರಣವೆನ್ನಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೆಎಂಎಫ್ ಹಾಲು ಹಾಗೂ ಹೈನೋತ್ಪನ್ನಗಳ ಮಾರಾಟದಲ್ಲಿ ಶೇಕಡಾ 10ರಷ್ಟು ಜಾಸ್ತಿಯಾಗಿದೆ. ಪ್ರಮುಖವಾಗಿ, ಮೊಸರು ಮಾರಾಟ ಪ್ರಮಾಣ ಶೇಕಡಾ 22ರಷ್ಟು ಅಧಿಕವಾಗಿದೆ. ಹಾಗೆಯೇ, ಬೆಣ್ಣೆ, ತುಪ್ಪ ಮತ್ತು ಐಸ್‌ಕ್ರೀಮ್‌ಗಳ ಮಾರಾಟವೂ ಗಣನೀಯ ಏರಿಕೆ ಕಂಡಿದೆ.
ಕೆಎಂಎಫ್ ಮೂಲಕ ರೈತರಿಗೆ ಆರ್ಥಿಕ ಶಕ್ತಿ ತುಂಬುವುದಕ್ಕೂ ಸರ್ಕಾರ ಆದ್ಯತೆ ನೀಡುತ್ತಿದೆ ಎಂಬ ಬಗೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನ ಸೆಳೆಯುತ್ತಾರೆ. “ಸರ್ಕಾರ ಕೆಎಂಎಫ್ ಗೆ ಹಾಲು ಮಾರಾಟ ಮಾಡುವವರಿಗೆ ಪ್ರತಿ ಲೀಟರಿಗೆ 5 ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದೆ. ಇದು ಪ್ರತಿದಿನ 1
ಕೋಟಿ ಲೀಟರ್ ಹಾಲಿಗೆ ನಿತ್ಯ 5 ಕೋಟಿ ರೂಪಾಯಿ, ಅಂದರೆ ತಿಂಗಳಿಗೆ 180 ಕೋಟಿ ರೂಪಾಯಿಗಳಾಗುತ್ತದೆ. ಇದು ಕೃಷಿಕರ ಆದಾಯ ಹೆಚ್ಚಿಸಲು ಸರ್ಕಾರ ಅನುಸರಿಸುತ್ತಿರುವ ಮಾರ್ಗೋಪಾಯಗಳಲ್ಲಿ ಒಂದಾಗಿದೆ” ಎನ್ನುತ್ತಾರೆ ಮುಖ್ಯಮಂತ್ರಿಯವರು. “ಸರ್ಕಾರವು ಕೆಎಂಎಫ್ ಮೂಲಕ ಖರೀದಿಸುವ ಹಾಲಿಗೆ ಉತ್ತಮ ಬೆಲೆ ನೀಡುವ ಜೊತೆಗೆ ಉತ್ತೇಜಕ ಕ್ರಮಗಳನ್ನು ಅನುಷ್ಠಾನಗೊಳಿಸಿರುವುದರಿಂದ ಹೆಚ್ಚಿನ ರೈತರು ಖಾಸಗಿ ಡೈರಿ ಫಾರ್ಮ್‌ಗಳಿಗಿಂತ ಕೆಎಂಎಫ್ ತೆಕ್ಕೆಯ ಡೈರಿಗಳಿಗೆ ಹಾಲು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ” ಎಂದು ದನಿಗೂಡಿಸುತ್ತಾರೆ ಭೀಮಾ ನಾಯ್ಕ.
ರಾಜ್ಯದ ಹೆಮ್ಮೆಯ ಸಂಸ್ಥೆಯಾದ ಕೆ.ಎಂ.ಎಫ್.ನ ‘ನಂದಿನಿ’ ಬ್ಯಾಂಡಿನ ಉತ್ಪನ್ನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೂ ದೊಡ್ಡ ಮಟ್ಟದಲ್ಲಿ ವಿಸ್ತರಣೆಗೊಂಡು ನಮ್ಮ ರೈತರ ಬದುಕು ಇನ್ನಷ್ಟು ಹಸನಾಗಲು ಕ್ಷೀರಪಥವಾಗಲಿ ಎಂಬುದೇ ನಾಡಿನ ಶ್ರೇಯೋಭಿಲಾಷಿಗಳ ಆಶಯವಾಗಿದೆ.